ಗಾರಿಬಾಲ್ಡಿ, ಜೂಸೆಪ್ಪೆ
1807-82. ಇಟಲಿಯ ರಾಷ್ಟ್ರಪ್ರೇಮಿ, ಹೋರಾಟಗಾರ, ಗಣರಾಜ್ಯವಾದಿ, ನಾಡಿನ ಏಕೀಕರಣವನ್ನು ಸಾಧಿಸಲು ಬಹು ಮಟ್ಟಿಗೆ ಕಾರಣರಾದವರ ಲ್ಲೊಬ್ಬ. ಇವನು 1807ರ ಜುಲೈ 4ರಂದು  ಇಟಲಿ ದೇಶದಲ್ಲಿದ್ದ ಫ್ರಾನ್ಸ್ ಚಕ್ರಾಧಿಪತ್ಯಕ್ಕೆ ಸೇರಿದ ನೀಸ್ ನಗರದಲ್ಲಿ ಜನಿಸಿದ ಮಗ ಪಾದ್ರಿಯಾಗಬೇಕೆಂಬುದು ತಂದೆತಾಯಿಯರ ಅಭಿಲಾಷೆಯಾಗಿತ್ತು. ಆದರೆ ಇವನನ್ನು ಕಡಲು ಆಕರ್ಷಿಸಿತು. ಇವನು ವ್ಯಾಪಾರ ಹಡಗೊಂದರಲ್ಲಿ ಬಹುಕಾಲ ನಾವಿಕನಾಗಿದ್ದ. ಇಟಲಿಯ ಕ್ರಾಂತಿ ನಾಯಕ ಜೂಸೆಪ್ಪೆ ಮಾಟ್ಸೀನಿಯ ಪ್ರಭಾವಕ್ಕೊಳಗಾಗಿ, ಅವನ (ಯಂಗ್ ಇಟಲಿ) ಯುವ ಇಟಲಿ ಸಂಘದ ಸದಸ್ಯನಾದ. ಪೈಮಾಂತೆಯಲ್ಲಿ ಜನರ ಬಂಡಾಯವನ್ನೆಬ್ಬಿಸುವ ಸಂಚೊಂದರಲ್ಲಿ (1834) ಭಾಗವಹಿಸಿದ್ದನೆಂಬುದು ಬಯಲಾದಾಗ ಅವನು ತಪ್ಪಿಸಿಕೊಂಡು ಓಡಿ ಹೋಗಿ ದಕ್ಷಿಣ ಅಮೆರಿಕ ತಲಪಿ, ಅಲ್ಲಿ 1836 ರಿಂದ 1848ರವರೆಗೆ ಅಲೆದಾಡಿದ ಅವನ ಗೈರುಹಾಜರಿಯಲ್ಲಿ ಅವನ ಮೇಲೆ ಮರಣದಂಡನೆಯ ಶಿಕ್ಷೆ ವಿಧಿಸಿತು.

ದಕ್ಷಿಣ ಅಮೆರಿಕದಲ್ಲೂ ಇವನು ಸುಮ್ಮನಿರಲಿಲ್ಲ; ಬ್ರೆಜಿಲ್ ವಿರುದ್ಧ ಬಂಡೆದ್ದಿದ್ದ ರೀಯೂ ಗ್ರಾಂಡೆ ದೂ ಸೂಲ್ ಪರವಾಗಿ ಕಡಲುಗಳ್ಳನಾಗಿ ಕಾರ್ಯಾಚರಣೆ ನಡೆಸಿದ. ಅರ್ಜೆಂಟೀನದ ವಿರುದ್ಧ ಉರುಗ್ವೆಯ ಪರವಾಗಿ ಹೋರಾಡಿದ. ಇವನ ನೆರವಿನಿಂದ 1843ರಲ್ಲಿ ಇಟಾಲಿಯನ್ ರೆಡ್ಷರ್ಟ್ ಸೈನ್ಯದಳವೊಂದನ್ನು (ಕೆಂಪಂಗಿಗಳು) ನಿರ್ಮಿಸ ಲಾಯಿತು. ಗೆರಿಲ್ಲಾ ಯುದ್ಧಕಾರ್ಯಾಚರಣೆಯಲ್ಲಿ ಗಾರಿಬಾಲ್ಡಿ ವಿಶೇಷಾನುಭವವನ್ನು ಸಂಪಾದಿಸಿದ್ದು ದಕ್ಷಿಣ ಅಮೆರಿಕದಲ್ಲಿದ್ದಾಗ ಇವನು ಆನ ಮೇರಿಯ ರಿಬೇರೊ ದ ಸಿಲ್ವ ಎಂಬವಳನ್ನು ಎತ್ತಿಕೊಂಡು ಹೋಗಿ, ಆಕೆಯ ಮೊದಲ ಗಂಡ ತೀರಿಕೊಂಡ ಮೇಲೆ ಮದುವೆಯಾದ (1842). ಗಾರಿಬಾಲ್ಡಿಯ ಹೋರಾಟಗಳಲ್ಲಿ ಅವಳೂ ಇವನೊಡನೆ ಇರುತ್ತಿದ್ದಳು. ಆಕೆ 1849ರಲ್ಲಿ ನಿಧನಳಾದಳು.

ಇಟಲಿಯಲ್ಲಿ ಕ್ರಾಂತಿ ಪರಿಸ್ಥಿತಿ ಏರ್ಪಟ್ಟಿದೆಯೆಂಬ ಸುದ್ದಿ ಕೇಳಿ ಗಾರಿಬಾಲ್ಡಿ ತನ್ನ ಕೆಲವು ಅನುಯಾಯಿಗಳೊಂದಿಗೆ 1848ರಲ್ಲಿ ತನ್ನ ನಾಡಿಗೆ ಹಿಂದಿರುಗಿದ. ಇಟಲಿಯ ಎಲ್ಲ ರಾಜ್ಯಗಳಲ್ಲೂ ಬಂಡಾಯಸ್ಥಿತಿಯಿತ್ತು. ಸಾರ್ದೆನ್ಯಾ ಆಸ್ಟ್ರಿಯಗಳ ನಡುವೆ ಯುದ್ಧ ಆರಂಭವಾಗಿತ್ತು. ಗಾರಿಬಾಲ್ಡಿ ಗಣತಂತ್ರವಾದಿಯಾಗಿದ್ದರೂ ಸಾರ್ದೆನ್ಯಾದ ದೊರೆಗೆ ನೆರವು ನೀಡಲು ಮುಂದೆ ಬಂದ. ಆದರೆ ದೊರೆ ಇದರಲ್ಲಿ ಉತ್ಸಾಹ ತೋರಲಿಲ್ಲ. ಆದ್ದರಿಂದ ಇವನು ಮಿಲಾನಿನ ನೆರವಿಗೆ ಹೋದ. ಸಾರ್ದೆನ್ಯ ಮಿಲಾನ್ಗಳು ಸೋತವು. ಮಿಲಾನ್ ಶರಣಾಗತವಾಯಿತು. ಗಾರಿಬಾಲ್ಡಿ ಸಣ್ಣ ಪಡೆಯೊಂದಿಗೆ ಬೆಟ್ಟಗಾಡು ಸೇರಿ ಆಸ್ಟ್ರಿಯನರಿಗೆ ಕಿರುಕುಳ ಕೊಡಲು ಯತ್ನಿಸಿದ. ಆದರೆ ವಿಫಲನಾಗಿ, ಗಡಿ ದಾಟಿ ಸ್ವಿಟ್ಜರ್ಲೆಂಡಿಗೆ ಹೋಗಿ ಅಲ್ಲಿಂದ ನೀಸ್ ತಲುಪಿದ. ಇಟಲಿಯಲ್ಲಿ ಆಗ ಇನ್ನೂ ಕ್ರಾಂತಿಕಾರಿ ಸರ್ಕಾರಗಳು ಉಳಿದಿದ್ದುವು. ಆದರೆ ಅವು ಯಾವುವೂ ಗಾರಿಬಾಲ್ಡಿಯ ನೆರವನ್ನು ಬಯಸಲಿಲ್ಲ. 1848ರ ನವೆಂಬರಿನಲ್ಲಿ 9ನೆಯ ಪೋಪ್ ಪಯಸ್ ರೋಮಿನಿಂದ ಓಡಿ ಹೋದಾಗ ಗಾರಿಬಾಲ್ಡಿ ರೋಮಿನ ಜನರಿಂದ ಆಹ್ವಾನಿತನಾಗಿ ಅದನ್ನು ಪ್ರವೇಶಿಸಿ ಫ್ರೆಂಚರ ಆಕ್ರಮಣ ವನ್ನೆದುರಿಸಿದ. ಆಗ ಇವನ ಧೈರ್ಯಸಾಹಸಗಳೂ ನಾಯಕತ್ವ ಗುಣವೂ ಸಂಘಟನೆಯ ಚಾತುರ್ಯವೂ ಪ್ರಕಾಶಕ್ಕೆ ಬಂದುವು. ಆದರೂ ಕೊನೆಗೆ ಆ ನಗರ ಶತ್ರುಗಳ ವಶವಾಯಿತು. ಫ್ರಾನ್್ಸ, ಆಸ್ಟ್ರಿಯ, ಸ್ಪೇನ್, ನೇಪಲ್್ಸ ಪಡೆಗಳು ಇವನನ್ನು ಬೆನ್ನಟ್ಟಿದುವು. ಗಾರಿಬಾಲ್ಡಿ ಹೆದರದೆ, ಶರಣಾಗದೆ ಹಿನ್ನಡೆದು ತಪ್ಪಿಸಿಕೊಂಡು ಅಮೆರಿಕಕ್ಕೆ ಹೋದ. ಸ್ವಾತಂತ್ರ್ಯ ಯೋಧನೆಂದೂ ಎರಡು ಪ್ರಪಂಚಗಳ ವೀರನೆಂದೂ ಗಾರಿಬಾಲ್ಡಿ ಪ್ರಖ್ಯಾತನಾದ. 1854ರಲ್ಲಿ ಇಟಲಿಗೆ ಹಿಂದಿರುಗಲು ಇವನಿಗೆ ಅವಕಾಶ ದೊರಕಿತು. ಕಾರ್ಸಿಕ ಸಾರ್ದೆನ್ಯಾಗಳ ನಡುವಣ ಕಾಪ್ರೇರಾ ದ್ವೀಪದ ಒಂದು ಭಾಗವನ್ನು ಕೊಂಡ. ಅಲ್ಲೆ ನೆಲಸುವುದು ಇವನ ಉದ್ದೇಶ ವಾಗಿತ್ತು. ಅಷ್ಟರಲ್ಲಿ ಮತ್ತೆ ಹೋರಾಟಕ್ಕೆ ಕರೆ ಬಂತು. ಸಾರ್ದೆನ್ಯಾಗೆ ಆಗ ಕಾವೂರ್ ಪ್ರಧಾನಿಯಗಿದ್ದ. ಆಸ್ಟ್ರಿಯದ ವಿರುದ್ಧ ವಾಗಿ ಮಾಡಲಿದ್ದ ಯುದ್ಧದಲ್ಲಿ ಗಾರಿಬಾಲ್ಡಿಯ ನೆರವು ಬಯಸಿದ. ಅಲ್ಲಿಯ ದೊರೆಗೆ ನೆರವು ನೀಡಲು ಗಾರಿಬಾಲ್ಡಿ ಸಿದ್ಧನಿದ್ದನಾದರೂ ದೇಶಭ್ರಷ್ಟನೆನಿಸಿದ್ದ ಇವನಿಗೆ ಮನ್ನಣೆ ನೀಡುವುದು ಕಷ್ಟವಾಗಿತ್ತು. ಅಲ್ಲದೆ ಕಾವೂರ್ ಗಾರಿಬಾಲ್ಡಿಗಳ ಉದ್ದೇಶ ಗಳು ಪರಸ್ಪರ ಭಿನ್ನವಾಗಿದ್ದುವು. ಆದರೂ ಕೊನೆಗೆ ಇವರ ನಡುವೆ ಒಪ್ಪಂದವಾಯಿತು. ದೊರೆ ವಿಕ್ಟರ್ ಇಮ್ಯಾನ್ಯುಯಲ್ನ ಅಡಿಯಲ್ಲಿ ಗಾರಿಬಾಲ್ಡಿ ಮೇಜರ್ ಜನರಲ್ ಆದ. ಇವನ ಸ್ವಯಂಯೋಧರ ಪಡೆ ಆಸ್ಟ್ರಿಯನ್ ಸೇನೆಯ ಹಾದಿ ತಪ್ಪಿಸಿ ಕಾದಿ ಅದನ್ನು ಸೋಲಿಸಿತು. ಆಲ್ಪ್ಸ ಪ್ರದೇಶ ವಿಮೋಚನೆಗೊಂಡಿತು. ಶಾಂತಿ ಕೌಲು ಏರ್ಪಟ್ಟಿತು. ಅನಂತರ ಗಾರಿಬಾಲ್ಡಿ ಟಸ್ಕನಿಯ ಕ್ರಾಂತಿಕಾರಿ ಸರ್ಕಾರಕ್ಕೆ ಸಹಾಯ ಸಲ್ಲಿಸಿದ. ಪೋಪ್ ರಾಜ್ಯದ ಮೇಲೂ ಏರಿಹೋಗಲು ಇವನು ಸಿದ್ಧನಾದ. ಅಷ್ಟರಲ್ಲಿ ದೊರೆ ಇಮ್ಯಾನ್ಯುಯಲನಿಂದ ತಡೆ ಬಂತು. ಗಾರಿಬಾಲ್ಡಿ ಮೇಜರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ. ಸವಾಯನ್ನೂ ಗಾರಿಬಾಲ್ಡಿಯ ಜನ್ಮ ಸ್ಥಳವಾದ ನೀಸನ್ನೂ ಸಾರ್ದೆನ್ಯಾ ಸರ್ಕಾರ ಫ್ರಾನ್ಸಿಗೆ ಒಪ್ಪಿಸಿದ್ದರಿಂದ ಇವನಿಗೆ ಕೋಪ ಬಂತು. ಅಲ್ಲಿಯ ಪಾರ್ಲಿಮೆಂಟನ್ನು ಪ್ರವೇಶಿಸಿ ಈ ಕ್ರಮವನ್ನು ಪ್ರತಿಭಟಿಸಿದ. 

ನೇಪಲ್ಸ ಸಿಸಿಲಿಗಳ ರಾಜನಾಗಿದ್ದ ಎರಡನೆಯ ಫ್ರಾನ್ಸಿಸನ ವಿರುದ್ಧ ಸಿಸಿಲಿಯ ಪ್ರಜೆಗಳು ಬಂಡಾಯ ಹೂಡಿದ್ದರು. ಗಾರಿಬಾಲ್ಡಿ 1860ರ ಮೇ ತಿಂಗಳಲ್ಲಿ ಸಿಸಿಲಿಯ ದಂಡಯಾತ್ರೆಗೆ ಎರಡು ಹಡಗುಗಳಲ್ಲಿ ಸುಮಾರು 1150 ಸ್ವಯಂ ಯೋಧರ ಮುಂದಾಳಾಗಿ ಜಿನೀವದಿಂದ ಹೊರಟ. ಅನಂತರ ಇವರು ಸಹಸ್ರರು ಎಂದು ಪ್ರಸಿದ್ಧರಾದರು. ಕೆಂಪಂಗಿ ಇವರ ಸಮವಸ್ತ್ರ. ವಿಕ್ಟರ್ ಎಮ್ಯಾನ್ಯುಯಲನ ಹೆಸರಿನಲ್ಲಿ ಸಿಸಿಲಿ ದ್ವೀಪದ ಸರ್ವಾಧಿಕಾರಿಯೆಂದು ಗಾರಿಬಾಲ್ಡಿ ಘೋಷಿತನಾದ. ಸಿಸಿಲಿಯಲ್ಲಿದ್ದ ಫ್ರಾನ್ಸಿಸನ 24000 ಸೈನಿಕರನ್ನು ದಿಟ್ಟ ಹೋರಾಟದಿಂದ ಗಾರಿಬಾಲ್ಡಿ ಸೋಲಿಸಿದ. ಅನಂತರ ನೇಪಲ್ಸಿನ ಆಕ್ರಮಣಕ್ಕೆ ಹೋದ. ಅದೂ ಬಹುತೇಕ ಇವನ ವಶವಾಯಿತು. ವಿಕ್ಟರ್ ಎಮ್ಯಾನ್ಯುಯಲ್ ನೇಪಲ್್ಸ ಪ್ರವೇಶಿಸಿದಾಗ ಅವನೊಂದಿಗೆ ಗಾರಿಬಾಲ್ಡಿಯೂ ಇದ್ದ. ಆದರೆ ದೊರೆಯ ಸನ್ಮಾನವನ್ನು ಸ್ವೀಕರಿಸಲೊಲ್ಲದೆ ಕಾಪ್ರೇರಾಗೆ ಹಿಂದಿರುಗಿದ. 

ಗಾರಿಬಾಲ್ಡಿಗೆ ಅಧಿಕಾರದ ಆಸೆ ಸ್ವಲ್ಪವೂ ಇರಲಿಲ್ಲವಾದರೂ ಇವನ ಬಗ್ಗೆ ಇಟಲಿಯ ಸರ್ಕಾರ ಎಂದಿಗೂ ನೆಮ್ಮದಿಯಾಗಿರಲಿಲ್ಲ. ಗಾರಿಬಾಲ್ಡಿಯ ಅನುಯಾಯಿ ಗಳನ್ನು ಸರ್ಕಾರ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದದ್ದು ಗಾರಿಬಾಲ್ಡಿಗೆ ಕೋಪವನ್ನುಂಟು ಮಾಡಿತು. ಗಾರಿಬಾಲ್ಡಿ ಗೆದ್ದ ಪ್ರಾಂತ್ಯಗಳ ಆಡಳಿತ ಸಮರ್ಪಕವಾಗಿರಲಿಲ್ಲ. ಆದ್ದರಿಂದ ಗಾರಿಬಾಲ್ಡಿ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದ. ಇಟಲಿಯ ಏಕೀಕರಣ ಕಾರ್ಯವನ್ನು ಪುರ್ಣಗೊಳಿಸುವುದು ಅವನ ಇಚ್ಛೆಯಾಗಿತ್ತು. ರೋಂ ವೆನಿಸ್ಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಇಟಲಿಯ ಸರ್ಕಾರ ಇವನಿಗೆ ಹೆಚ್ಚಿನ ನೆರವು ನೀಡಲಿಲ್ಲ. ಗಾರಿಬಾಲ್ಡಿಯನ್ನೂ ಇವನ ಅನುಯಾಯಿಗಳನ್ನೂ ಅದು ಬಂಧಿಸಿ ವಿಮೋಚನೆಗೊಳಿಸಿತು. ಗಾರಿಬಾಲ್ಡಿ 1864ರಲ್ಲಿ ಲಂಡನಿಗೆ ಹೋದಾಗ ಇವನಿಗೆ ಅದ್ಭುತವಾದ ಸ್ವಾಗತ ದೊರಕಿತು. 1867ರಲ್ಲಿ ಇವನು ಇನ್ನೊಮ್ಮೆ ರೋಮಿನ ಮೇಲೆ ಏರಿ ಹೋದ. ಸರ್ಕಾರ ಇವನನ್ನು ದಸ್ತಗಿರಿ ಮಾಡಿ ಕಾಪ್ರೇರಾಗೆ ಕಳುಹಿಸಿಕೊಟ್ಟಿತು. ಇಟಲಿಯ ಸರ್ಕಾರ ಇವನಿಗೆ ದಿಗ್ಬಂಧನ ವಿಧಿಸಲು ಹವಣಿಸುತ್ತಿದಾಗ ಇವನು ತಪ್ಪಿಸಿಕೊಂಡು ರೋಂ ಪ್ರದೇಶವನ್ನು ಹೊಕ್ಕ. ಇವನ ಪಡೆಗಳಿಗೆ ಸೋಲಾಯಿತು. ಇವನು ಇಟಲಿಯ ಎಲ್ಲೆಯನ್ನು ದಾಟಿ ಬಂದಾಗ ಸರ್ಕಾರ ಇವನನ್ನು ಮತ್ತೆ ದಸ್ತಗಿರಿ ಮಾಡಿ ಕಾಪ್ರೇರಾಗೆ ಕಳುಹಿಸಿತು. 1870ರಲ್ಲಿ ಗಾರಿಬಾಲ್ಡಿ ಇನ್ನೊಂದು ಸೇನೆಯನ್ನು ಸಜ್ಜುಗೊಳಿಸಿದ. ಫ್ರಾನ್್ಸ - ಜರ್ಮನಿ ಯುದ್ಧದಲ್ಲಿ ಪರ್ಷಿಯ ವಿರುದ್ಧ ಫ್ರಾನ್ಸಿಗೆ ನೆರವು ನೀಡುವುದು ಉದ್ದೇಶವಾಗಿತ್ತು. ಇವನ ನೆರವು ತುಂಬ ಉಪಯುಕ್ತವೆನಿಸಿತು. ಬಾರ್ಡೋದ ರಾಷ್ಟ್ರೀಯ ಸಭೆಗೆ ಗಾರಿಬಾಲ್ಡಿ ಆಯ್ಕೆ ಹೊಂದಿದ. ಆದರೆ ಅದರಲ್ಲಿರಲಾರದೆ ರಾಜೀನಾಮೆ ಕೊಟ್ಟ. ಅನಂತರ ಇವನು ರಾಜಕೀಯದಲ್ಲಿ ವಿಶೇಷವಾದ ಪಾತ್ರ ವಹಿಸಲಿಲ್ಲ. ಗಾರಿಬಾಲ್ಡಿ ಕಾ ಪ್ರೇರಾದಲ್ಲಿ 1882ರ ಜೂನ್ 2ರಂದು ತೀರಿಕೊಂಡ.
 
ಗಾರಿಬಾಲ್ಡಿ ಚಿಂತನಪರನಾಗಿರಲಿಲ್ಲ. ಇವನು ಆವೇಶ ಭರದಲ್ಲಿ ಪರಸ್ಪರ ವಿರುದ್ಧವಾದ ಭಾವನೆಗಳನ್ನು ಬೋಧಿಸುತ್ತಿದ್ದದ್ದುಂಟು. ಶಾಸನಸಭೆಗಳಲ್ಲಿ ಇವನಿಗೆ ಹೆಚ್ಚಿನ ನಂಬಿಕೆ ಇರಲಿಲ್ಲ. ಶಾಸನಸಭೆಗಳಲ್ಲಿ ಇವನು ಹೆಚ್ಚು ಕಾಲ ಇರುತ್ತಿರಲಿಲ್ಲ. ಕೆಲವು ವಿಷಯಗಳು ಇವನಿಗೆ ಅರ್ಥವಾಗುತ್ತಿರಲಿಲ್ಲ. ಯುರೋಪಿನಲ್ಲಿ ಶೀಘ್ರವಾಗಿ ಸಂಭವಿಸುತ್ತಿದ್ದ ರಾಜಕೀಯ ಬದಲಾವಣೆಗಳನ್ನು ಇವನು ಅರಿತುಕೊಳ್ಳಲಾರದೆ ಹೋದ. ಇವನು ಮೂಲತ: ಯೋಧ. ಅಧಿಕಾರಕ್ಕೆ ಆಸೆ ಪಡದೆ ಇಟಲಿಯ ಏಕೀಕರಣ ಸಾಧನೆಗಾಗಿ ನಿರಂತರವಾಗಿ ಶ್ರಮಿಸಿ ಬಹುಮಟ್ಟಿಗೆ ಸಫಲನಾದ ಗಾರಿಬಾಲ್ಡಿಗೆ ಇಟಲಿಯ ಇತಿಹಾಸದಲ್ಲಿ ಹಿರಿಯ ಸ್ಥಾನವಿದೆ.				   
ಸಾಹಿತ್ಯ ಕೃತಿಗಳು
ಹರಿದು ಹಂಚಿ ಹೋಗಿದ್ದ ಇಟಲಿಯನ್ನು ಸಮಗ್ರ ರಾಷ್ಟ್ರವನ್ನಾಗಿ ಒಂದುಗೂಡಿಸಿದ ಅಪ್ರತಿಮ ಯೋಧ ಗಾರಿಬಾಲ್ಡಿ ತಾನಾಗಿ ಸಾಹಿತಿಯಾಗ ಬಯಸಿದವನಲ್ಲ; ಕತ್ತಿ ಹಿರಿದು ಹೋರಾಡಿದಷ್ಟು ಸುಲಭವಾಗಿ ಲೇಖನಿ ಹಿಡಿದು ಬರೆದವನಲ್ಲ. ಆದರೂ ಈ ಶೂರ ಸೈನಿಕ ಎರಡು ಬಾರಿ ಸಾಹಿತ್ಯ ರಚನೆಗೆ ಕೈಹಾಕಿದ್ದುಂಟು. ಇವನು ತನ್ನ ಸಾಹಸಮಯ ಬದುಕಿನ ವೈವಿಧ್ಯಪುರ್ಣ ಕಥೆಯನ್ನು ಹೇಳಲು ಒಮ್ಮೆ ಕಾವ್ಯವನ್ನು, ಇನ್ನೊಮ್ಮೆ ಗದ್ಯವನ್ನು ಮಾಧ್ಯಮವಾಗಿ ಬಳಸಿದ. ಗಾರಿಬಾಲ್ಡಿಯ ಆತ್ಮಕಥೆಯಲ್ಲಿ ಎಷ್ಟು ಲೋಪದೋಷಗಳಿದ್ದರೂ ಅದ್ಭುತರಮ್ಯ ವೆನಿಸುವಂಥ ನೂರಾರು ಘಟನೆಗಳಿರುವ ಆ ಗ್ರಂಥ ಓದುಗರ ಕುತೂಹಲವನ್ನು ಕೆರಳಿಸುತ್ತದೆ. ಲೇಖಕ ವಿರಾಮವಾಗಿ ಕುಳಿತು ಸುಸಂಬದ್ಧವಾಗಿ ಬರೆದ ಸಾಹಿತ್ಯಕೃತಿಯಲ್ಲ ಅದು. ಗಾರಿಬಾಲ್ಡಿ ಅದನ್ನು ತನ್ನ ವ್ಯಾಪಕವಾದ ಸಮರ ಚಟುವಟಿಕೆಗಳ ನಡುವೆ ಅಲ್ಪಸ್ವಲ್ಪ ಬಿಡುವು ಸಿಕ್ಕಾಗ ಆಗಾಗ ಬರೆದು ಮುಗಿಸಬೇಕಾಯಿತು. ಇದರಲ್ಲಿ ಇವನು ದಕ್ಷಿಣ ಅಮೆರಿಕ, ಇಟಲಿ ಮತ್ತು ಫ್ರಾನ್್ಸಗಳಲ್ಲಿ ಕೈಕೊಂಡ ಅಸಾಧಾರಣ ದಂಡಯಾತ್ರೆಗಳನ್ನು, ಸಮರ ಸಾಹಸಗಳನ್ನು, ನೂರೆಂಟು ವೈವಿಧ್ಯಮಯ ಅನುಭವಗಳನ್ನು ನೇರ, ಸರಳ ಶೈಲಿಯಲ್ಲಿ ನಿರೂಪಿಸಿದ್ದಾನೆ. ಈ ಕಥನದಲ್ಲಿ ಇವನ ಉತ್ಕಟ ಸ್ವಾತಂತ್ರ್ಯಾಭಿಲಾಷೆ, ನಿರಂತರ ರಾಷ್ಟ್ರಾಭಿಮಾನ ಇವು ಎದ್ದು ಕಾಣುತ್ತವೆ. ಸೋಲು ಗೆಲುವುಗಳ ಏರಿಳಿತಕ್ಕೆ ಸಿಕ್ಕಿ ಹೊಯ್ದಾಡುತ್ತಿದ್ದ ಇವನ ಜೀವನದಲ್ಲಿ ಸಂಭವಿಸಿದ ಘಟನೆಗಳ ನಿರೂಪಣೆ ಇವನ ಮಾನಸಿಕ ತುಯ್ತವನ್ನು, ವ್ಯಗ್ರತೆಯನ್ನು ಯಥಾವತ್ತಾಗಿ ಪಡಿಮೂಡಿಸುವಂತಿವೆ. ಅತಿಭಾವುಕನೂ ಭಾವೋದ್ವಿಗ್ನನೂ ಆದ ಯೋಧನ ಚಿಂತನಶೀಲತೆ ಅಲ್ಲಲ್ಲಿ ಪುಟಿದೆದ್ದು ನಿರೂಪಣೆಯ ಶೈಲಿಯನ್ನೂ ಕಾವ್ಯಮಯಗೊಳಿಸಿದೆ. ಆತ್ಮವೃತ್ತಾಂತವನ್ನು ತಿಳಿಸುವ ದಿ ಪೊಯೆಮ ಆಟೊಬಯೋಗ್ರಾಫಿಕೊ ಎಂಬ ಸರಳ ರಗಳೆಯ ನೀಳ್ಗವನದಲ್ಲಿ ಗಾರಿಬಾಲ್ಡಿ ತನ್ನ ಹಲವು ವೈಯಕ್ತಿಕ ಅನುಭವಗಳನ್ನು ತೋಡಿಕೊಂಡಿದ್ದಾನೆ. ಅದನ್ನು ಇವನು 1862ರಲ್ಲಿ ಕ್ಯಾಪ್ರೇರಾ ದ್ವೀಪದಲ್ಲಿದ್ದಾಗ ಬರೆದ. ರೋಮ್ ನಗರವನ್ನು ಶತ್ರುಗಳಿಂದ ವಿಮುಕ್ತಿಗೊಳಿಸಲು ಸ್ವಂತ ಪ್ರೇರಣೆಯಿಂದ ನಡೆಸಿದ ಹೋರಾಟ ವಿಫಲಗೊಂಡಾಗ ಇವನಿಗೆ ಉಂಟಾದ ಅತೀವ ನಿರಾಶೆ, ವೇದನೆ, ಕೋಪೋದ್ವೇಗಗಳನ್ನು ಇಲ್ಲಿ ವಿವರಿಸಿದ್ದಾನೆ. ಇದಲ್ಲದೆ ಇವನು ಬೇರೆ ಬೇರೆ ಕವನಗಳನ್ನೂ ಬರೆದನೆಂದು ಹೇಳುವುದುಂಟು. ಆದರೆ ಅವುಗಳಲ್ಲಿ ಹೆಚ್ಚು ಸಾಹಿತ್ಯಕ ಮೌಲ್ಯಗಳಿಲ್ಲವೆಂಬುದು ಸ್ಪಷ್ಟವಾಗಿದೆ. ಇವನು ತನ್ನ ನೀಳ್ಗವನವನ್ನು ಬರೆದದ್ದು ಸಹ ಮನರಂಜನೆಗಲ್ಲ. ಅದರಲ್ಲಿ ಉತ್ಕಟ ಸನ್ನಿವೇಶಗಳಲ್ಲಿ ಸೈನಿಕರನ್ನು ಹುರಿದುಂಬಿಸಲು ಬರೆದ ಯುದ್ಧ ಘೋಷಣೆಗಳಂಥ ಮಾತುಗಳು ಬರುತ್ತವೆ. ರಣದುಂದುಭಿಗಳ ಮೊರೆತವನ್ನು, ಉಕ್ಕುವ ಕಡಲಿನ ಕುದಿತವನ್ನು ಅಲ್ಲಿ ಕೇಳಬಹುದು. ಈ ಕವನದಲ್ಲಿ ಅವನ ರಾಗರಂಜಿತ ಶೈಲಿ ಆಗಾಗ ಭವ್ಯ ಔನ್ನತ್ಯ ಸಾಧಿಸುತ್ತದೆ. ಇವನು ಅಪಾಯದ ಪ್ರಪಾತದಲ್ಲಿ ತೂಗಾಡುತ್ತಿದ್ದರೂ ತನ್ನ ಧೈರ್ಯಶೌರ್ಯಗಳನ್ನು ಪ್ರದರ್ಶಿಸುತ್ತ ತನ್ನ ಸೈನಿಕರನ್ನು, ಅನುಯಾಯಿಗಳನ್ನು ಹೇಗೆ ತನ್ನ ಸಮ್ಮೋಹಕ ವಾಕ್ಶಕ್ತಿಯಿಂದ ಸೆಳೆಯುತ್ತಿದ್ದನೆಂಬು ದನ್ನು ಇವನ ಆತ್ಮಕಥೆಯ ನಿರೂಪಣೆಯಲ್ಲಿ ಗುರುತಿಸಬಹುದು. ಸೋತು ಹಿಮ್ಮೆಟ್ಟುತ್ತಿದ್ದ ಸೈನಿಕರನ್ನು ಕುರಿತು ಇವನು ‘ನನ್ನ ಹಿಂದೆ ಬರುವ ನೀವು ಹಸಿವು, ನೀರಡಿಕೆ, ಮುಗಿಯದ ಅಲೆತ, ಯುದ್ಧಗಳು, ಸಾವು - ಇವಕ್ಕೆ ಸಿದ್ಧರಾಗಿ ಬನ್ನಿ. ನಾನು ಬೇರೆ ಏನನ್ನೂ ನಿಮಗೆ ನೀಡಲಾರೆ’ - ಎಂದು ಘೋಷಿಸಿದ್ದು ಲೋಕವಿಖ್ಯಾತವಾಗಿದೆ. ಗತ್ಯಂತರವಿಲ್ಲದೆ ಕಠೋರ ಸ್ಥಿತಿಯಲ್ಲಿ, ಹತಾಶನಾಗಿ ಮೆಂಟಾನಾ ನಗರವನ್ನು ಕೊನೆಯ ಸಲ ಮುತ್ತುವಾಗ ಇವನ ಸೈನಿಕರಿಗೆ ‘ಬನ್ನಿ ನನ್ನ ಜತೆ, ಸಾಯಲು ಸಿದ್ಧರಾಗಿ ಬನ್ನಿ, ಕಾದಿ ಸಾಯೋಣ ಬನ್ನಿ. ಸಾಯಲು ಹೆದುರುತ್ತೀರಾ? ಏಕೆ?’ - ಎಂದು ಹೇಳಿದ ಮಾತುಗಳಲ್ಲಿ ಕಾವ್ಯದ ಅಸಾಧಾರಣ ಮಿಂಚಿದೆ. 		      

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ